'ಹಾಲುರಾಮೇಶ್ವರ ಕ್ಷೇತ್ರ', ಕರ್ನಾಟಕ ರಾಜ್ಯ ದ, ಚಿತ್ರದುರ್ಗದಿಂದ ಸುಮಾರು ೫೦ ಕಿಮೀ ದೂರದಲ್ಲಿ, ಹೊಸದುರ್ಗ ತಾಲ್ಲೂಕಿನಲ್ಲಿರುವ ಪುಣ್ಯ ಕ್ಷೇತ್ರ, ಹೊಸದುರ್ಗದಿಂದ ೧೨ ಕಿ.ಮೀ. ದೂರದಲ್ಲಿರುವ ಈ ತೀರ್ಥ ಕ್ಷೇತ್ರವನ್ನು ಖಾಸಗಿ ಬಸ್ಸಿನಲ್ಲಿ ತಲುಪಬಹುದು. ತ್ರೇತಾಯುಗದಲ್ಲಿ ಶ್ರೀರಾಮಚಂದ್ರನ ಕೈಯಿಂದ ಪ್ರತಿಷ್ಠೆಯಾಗಿದೆ, ಎಂದು ಹೇಳಲಾದ ಶಿವಲಿಂಗ, 'ಉದ್ಭವ ಮೂರ್ತಿ'ಎಂದು ಜನ ನಂಬುತ್ತಾರೆ. ದೇವಾಲಯದ ಮುಂದೆ 'ನಂದಿ ಮೂರ್ತಿ'ಯನ್ನೂ ನಾವು ಕಾಣಬಹುದು. 'ಗಂಗಾ ಕೊಳ' ಇಲ್ಲಿಯ ವಿಶೇಷ. ಅಲ್ಲಿಗೆ ಹೋದ ಭಕ್ತರು ಮೊದಲು ಗಂಗಾಮಾತೆಗೆ ವಂದಿಸಿ, ಕೊಳದಲ್ಲಿ ಸ್ನಾನಮಾಡಿ, ತಮ್ಮ ಮನಸ್ಸಿನಲ್ಲಿ ಕೋರಿಕೊಳ್ಳುತ್ತಾರೆ. ಸ್ವಲ್ಪ ಸಮಯದಲ್ಲಿ ಕೊಳದ ನೀರಿನ ಮೇಲೆ ವಸ್ತುಗಳು ತೇಲುತ್ತಾ ಬರುತ್ತವೆ. ಅರ್ಚಕರು ಇದರ ಬಗ್ಗೆ ಈಡೇರುವ ಬಯಕೆಗಳ ಬಗ್ಗೆ ತಿಳಿಸುತ್ತಾರೆ. ಭಕ್ತರ ಬೇಡಿಕೆಗೆ ತಕ್ಕ ಹಾಗೆ ನೀರಿನಲ್ಲಿ ತೇಲುತ್ತಾ ಕಾಣಿಸಿಕೊಳ್ಳುವ ವಸ್ತುಗಳು ಹಲವಾರು ಬಗೆಯವು. ವೀಳೆಯದೆಲೆ, ಹೂವು, ಹಣ್ಣು, ಕಾಯಿ, ಮೊಸರನ್ನ,, ಬೆಳ್ಳಿಯ ನಾಣ್ಯ,, ತೆಂಗಿನಕಾಯಿ , ಮೊದಲಾದವುಗಳು. ಇಲ್ಲಿಗೆ ಭೇಟಿನೀಡುವ ಭಕ್ತರ ಬಾಯಿನಿಂದ "ಉದ್ಭವಗಂಗೆ" ಎಂದೇ ಕರೆಸಿಕೊಳ್ಳುವ ಪುಣ್ಯಸ್ಥಳವಾಗಿದ್ದು ಪ್ರತೀದಿನ ನೂರಾರು ಭಕ್ತಾಧಿಗಳು ಭೇಟಿನೀಡುತ್ತಾರೆ. ಮಕ್ಕಳಿಲ್ಲದವರು ಇಲ್ಲಿ ಭಗವಂತನಲ್ಲಿ ಹರಕೆ ಸಲ್ಲಿಸುತ್ತಾರೆ. == ಐತಿಹ್ಯ == ವಾಲ್ಮೀಕಿ ಮಹರ್ಷಿಗಳ ಪತ್ನಿ, 'ಸುದತಿದೇವಿ' ಕಾಶಿಯಲ್ಲಿ ಗಂಗೆಗೆ ಬಾಗಿನ ರೂಪದಲ್ಲಿ ಸಮರ್ಪಿಸಿದ ವಜ್ರಖಚಿತ ಕಡಗ, ಈ ಊರಿನ ಹುತ್ತದಲ್ಲಿ ದೊರಕಿದಾಗ ಅಲ್ಲಿ ಗಂಗೋದ್ಭವವೂ ಆಯಿತು ಎಂಬ ನಂಬಿಕೆ ಪ್ರಚಲಿತದಲ್ಲಿದೆ. ಈ ವಿಷಯ ತಿಳಿದ ವಾಲ್ಮೀಕಿ ಮಹರ್ಷಿಗಳು ಇಲ್ಲಿಯೇ ನೆಲೆ ನಿಂತು, ಬರುವ ಭಕ್ತರ ಅದೃಷ್ಟಾನುಸಾರ ಬೇಡಿದ ಪ್ರಸಾದ ನೀಡೆಂದು ಗಂಗೆಗೆ ತಿಳಿಸಿ, ಗಂಗಾಮಾತೆಯ ವಿಗ್ರಹ ಪ್ರತಿಷ್ಠಾಪಿಸಿ 'ರಾಮೇಶ್ವರ'ದತ್ತ ಹೊರಟರು. ಆಗ ಹಾಲಿನ ಬಣ್ಣದ ನೀರು ಉದ್ಭವಿಸಿದ ಈ ಕ್ಷೇತ್ರಕ್ಕೆ ತಾವು ಹೊರಟಿದ್ದ ರಾಮೇಶ್ವರದ ಹೆಸರು ಸೇರಿಸಿ, 'ಹಾಲು ರಾಮೇಶ್ವರ' ಎಂದು ನಾಮಕರಣ ಮಾಡಿದರು ಎನ್ನುತ್ತಾರೆ. ಅಕ್ಷೇತ್ರದಲ್ಲಿ ಗಂಗೆ ಆವಿರ್ಭವಿಸಲು ಕಾರಣರಾದ ವಾಲ್ಮೀಕಿ ಮಹರ್ಷಿಗಳ ಪತ್ನಿ, 'ಸುದತಿದೇವಿ'ಯವರ ವಿಗ್ರಹವೂ ಇದೆ. == ಇಷ್ಟಾರ್ಥ ಸಿದ್ಧಿ == ಕರ್ನಾಟಕ ರಾಜ್ಯದ ನಾನಾ ಭಾಗಗಳಿಂದ ಮತ್ತು ಬೇರೆ ರಾಜ್ಯಗಳಿಂದಲೂ ಶ್ರದ್ಧಾಳುಗಳು ಈ ಕ್ಷೇತ್ರಕ್ಕೆ ಬರುತ್ತಾರೆ. ಗಂಗಾ ಕೊಳದಲ್ಲಿ ಮಿಂದು ಪೂಜೆ ಸಲ್ಲಿಸುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಯಾಗುವುದೇ, ಎಂದು ದೇವರಲ್ಲಿ ಕೇಳಿಕೊಳ್ಳುತ್ತಾರೆ. ಫಲದ ರೀತಿಯಲ್ಲಿ ಕೊಳದ ನೀರಿನ ಮೇಲೆ ತೇಲಿಬರುವ ನಾನಾ ವಸ್ತುಗಳನ್ನು ಕಂಡ ಬಳಿಕ, ಅಲ್ಲಿನ ಅರ್ಚಕರು ಅದರ ಬಗ್ಗೆ ಸಿದ್ಧಿಫಲವನ್ನು ತಿಳಿಯ ಹೇಳುತ್ತಾರೆ. == ಸಾಮೂಹಿಕ ವಿವಾಹ == ಈ ಕ್ಷೇತ್ರದಲ್ಲಿ ಈಶ್ವರನ ದೇವಾಲಯಗಳು ಬಸವಣ್ಣನ ವಿಗ್ರಹಗಳು ಹಾಗು ನೀರಿನ ಕೊಳಗಳಿವೆ. 'ಸಮುದಾಯ ಭವನ'ವನ್ನು ಇತ್ತೀಚೆಗಷ್ಟೇ ನಿರ್ಮಿಸಿದ್ದಾರೆ. ಇಲ್ಲಿ ಸರಳವಾದ ರೀತಿಯಲ್ಲಿ 'ಸಾಮೂಹಿಕ ವಿವಾಹ'ಗಳು ಜರುಗುತ್ತವೆ. == ದೇವರ ಆಗಮನ == ತಾಲ್ಲೂಕಿನ ನಾನಾ ಕಡೆಗಳಿಂದ ದೇವರು ವರ್ಷಕ್ಕೊಮ್ಮೆ ಕ್ಷೇತ್ರಕ್ಕೆ ಆಗಮಿಸಿ, ಗಂಗಾ ಸ್ನಾನ ಮಾಡುವುದು ಬಹಳ ಹಿಂದಿನಿಂದ ಪ್ರಚಲಿತದಲ್ಲಿರುವ ವಿಷಯ == ಯುವ ಭವನ ನಿರ್ಮಾಣ == ಸನ್ ೨೦೧೦ ರಲ್ಲಿ ಕರ್ನಾಟಕ ಸರಕಾರ, 'ಯುವ ಭವನ'ವನ್ನು ನಿರ್ಮಿಸಿದೆ. ತೋಟಗಾರಿಕೆ ಇಲಾಖೆಯ ವತಿಯಿಂದ ಜರುಗುತ್ತಿರುವ ಈ ಕಾರ್ಯಕ್ರಮವನ್ನು ಸ್ಥಳೀಯರ ಜೊತೆಗೆ ಹೊರಗಡೆಯಿಂದ ಬರುವ ಪ್ರವಾಸಿಗರೂ ಇಲ್ಲಿ ನೋಡಬಹುದಾದ ಜಾಗಗಳಲ್ಲೊಂದು. == ಮೈಸೂರರಸರ ಸಂಬಂಧ == ಹಿಂದಿನ ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜ ಒಡೆಯರು ಇಲ್ಲಿ ಬಂದು ಗಂಗೆಯನ್ನು ಪೂಜಿಸಿ ಸಂತಾನ ಕರುಣಿಸುವಂತೆ ಕೋರಿದಾಗ, ಅವರಿಗೆ ಬೆಳ್ಳಿ ತೊಟ್ಟಿಲು ಬಂದಿತೆಂದೂ, ಆ ನಂತರವೇ ಶ್ರೀಕಂಠದತ್ತ ನರಸಿಂಹರಾಜ ಒಡೆಯರು ಜನಿಸಿದರೆಂದೂ ಸ್ಥಳೀಯ ಉಲ್ಲೇಖವಿದೆ ಎನ್ನುತ್ತಾರೆ. == ಪೂಜಾ ವಿಧಾನಗಳು == ನವರಾತ್ರಿ, ಶಿವರಾತ್ರಿಯ ವೇಳೆ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ರಾಮೇಶ್ವರ ಸ್ವಾಮಿಗೆ 'ಶೈವಾಗಮ ಪದ್ಧತಿ'ಯಂತೆ ನಿತ್ಯ ಪೂಜೆ ನಡೆಯುತ್ತದೆ. ಹಲವು ಭಕ್ತರು ಹರಕೆ ಹೊತ್ತು ಇಲ್ಲಿ ಬಂದು ಮದುವೆ ಮಾಡಿಕೊಳ್ಳುತ್ತಾರೆ. ಇಲ್ಲಿಗೆ ಬರುವ ಭಕ್ತರಿಗೆ ಜಾತಿ, ಮತ, ಧರ್ಮಗಳ ಭೇದವಿಲ್ಲದೆ, ದೇವರನ್ನು ಮುಟ್ಟಿ ಪೂಜಿಸುವ ಅವಕಾಶವುಂಟು. ಹಾಲುರಾಮೇಶ್ವರ ಕ್ಷೇತ್ರದ ಸಮೀಪದಲ್ಲಿರುವ ದೇವಾಲಯಗಳು : ಹಾಲುರಾಮೇಶ್ವರ ದೇವಾಲಯ, ಗಂಗಾಮಾತೆ ದೇವಾಲಯ, ಶ್ರೀಸೀತಾರಾಮರ ಗುಡಿ, ಶ್ರೀಮೂಲ ಗಂಗಾ ಗುಡಿ, ಶ್ರೀ ಪಂಚಲಿಂಗೇಶ್ವರ ಗುಡಿ, ಬೇಡರ ಕಣ್ಣಪ್ಪ ದೇವಾಲಯ ಪುರಾತನ ಅಶ್ವತ್ಥಕಟ್ಟೆಯಿದೆ. ಹುತ್ತವಿದ್ದ ಜಾಗದಲ್ಲಿ ಹಾಸುಗಲ್ಲು ಹಾಕಿ ಅದರ ಮೇಲೆ ನಂದಿಯ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. == ಅಭಿವೃದ್ಧಿಕಾರ್ಯಗಳು == ಈ ಕ್ಷೇತ್ರವನ್ನು ಹಿಂದೆ ವಿಜಯನಗರದ ಅರಸರು, ದುರ್ಗದ ಪಾಳೆಯಗಾರರು ಅಭಿವೃದ್ಧಿ ಪಡಿಸಿದ್ದರು. ರಾಜ್ಯ ಸರ್ಕಾರ ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ೪ ಕೋಟಿ ರೂಪಾಯಿಗಳ 'ಮಾಸ್ಟರ್ ಪ್ಲಾನ್' ರೂಪಿಸಿದೆ. ಸುಮಾರು ೨೫ ವರ್ಷಗಳ ಹಿಂದೆ ಇಲ್ಲಿಗೆ ಆಗಮಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಯವರು, 'ಪ್ರಗತಿ ಗಂಗಾ ಯೋಜನೆ' ಉದ್ಘಾಟಿಸಿ, 'ಹಾಲು ರಾಮೇಶ್ವರ' ಹಾಗೂ 'ಗಂಗಾಮಾತೆ'ಯನ್ನು ಪೂಜಿಸಿದಾಗ, ಅವರಿಗೆ 5 ದಳದ ಬಿಲ್ವಪತ್ರೆ ಪ್ರಸಾದವಾಯಿತು. ದೇವರ ಸಂಕಲ್ಪದಂತೆ ಶ್ರೀಗಳು ಇಲ್ಲಿ 'ಮಂಜುಶ್ರೀಭವನ' ನಿರ್ಮಿಸಿದರು. ಪ್ರಸ್ತುತ ಈ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದೆ. == ಬಸ್ಸಿನ ವ್ಯವಸ್ಥೆ == 'ಚಿತ್ರದುರ್ಗ' ದಿಂದ 'ತಾಳ್ಯ' ದವರೆಗೆ ನೇರವಾದ ಬಸ್ ವ್ಯವಸ್ಥೆಯಿದೆ. ತಾಳ್ಯದಿಂದ 'ಹಾಲುರಾಮೇಶ್ವರ' ಬಹಳ ಸಮೀಪ. ಶಿವಮೊಗ್ಗ-ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸಿ 'ಶಿವಗಂಗ'ಯಲ್ಲಿ ಇಳಿದು, ರಿಕ್ಷಾದಲ್ಲಿ ನೇರವಾಗಿ ಹೋಗಬಹುದು. ಖಾಸಗಿ ವಾಹನಗಳಲ್ಲಿಯೂ ನೂರಾರು ಭಕ್ತರು ಪ್ರತಿದಿನ ಬಂದು ಹೋಗುತ್ತಾರೆ. ಹೊಸದುರ್ಗದಿಂದ ೧೨ ಕಿ.ಮೀ. ದೂರದಲ್ಲಿರುವ ಈತೀರ್ಥ ಕ್ಷೇತ್ರವನ್ನು ಖಾಸಗಿ ಬಸ್ಸಿನಲ್ಲಿ ತಲುಪಬಹುದು.